ಚಾಮರಾಜನಗರ: ಹುಲಿ ಕೆಲವೊಮ್ಮೆ ತನಗಿಂತ ಹತ್ತಾರು ಪಟ್ಟು ಬಲಿಷ್ಠವಾದ ಪ್ರಾಣಿ ಆನೆಯನ್ನೇ ಬೇಟೆಯಾಡುತ್ತದೆ. ಅದರಂತೆ, ಗುಂಪಿನಲ್ಲಿ ಮೇಯುತ್ತಿದ್ದ ಆನೆ ಮೇಲೆ ಹುಲಿಯೊಂದು ದಾಳಿ ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಫಾರಿಯಲ್ಲಿ ನಡೆದಿದೆ. ಈ ದೃಶ್ಯವನ್ನು ಕಂಡು ಪ್ರವಾಸಿಗರು ಥ್ರಿಲ್ ಆಗಿದ್ದಾರೆ.
ಹೌದು, ತಮ್ಮ ಪಾಡಿಗೆ ಮೇಯುತ್ತಿದ್ದ ಆನೆ ಹಿಂಡಿನ ಮೇಲೆ ದಾಳಿ ಮಾಡಲು ಹೊಂಚು ಹಾಕಿ ಕುಳಿತಿದ್ದ ಹುಲಿ ಆನೆಯ ಕಾಲಿಗೆ ಎರಗಿದೆ. ಇದರಿಂದ ಎಚ್ಚೆತ್ತ ಆನೆ ಹಿಂಡು ಘೀಳಿಟ್ಟು ಹುಲಿಯನ್ನು ಹಿಮ್ಮೆಟ್ಟಿಸಿದೆ.
ಇನ್ನು, ಹುಲಿ ಧೈರ್ಯ ಕಂಡ ಪ್ರವಾಸಿಗರು ರೋಮಾಂಚನಗೊಂಡಿದ್ದು, ಬೇಟೆ ಯತ್ನದ ವಿಡಿಯೋವನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೆಲ ದಿನಗಳ ಹಿಂದೆ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಹುಲಿಯೊಂದು ಆನೆ ಮರಿಯನ್ನು ಬೇಟೆಯಾಡಿ ಕೊಂದಿತ್ತು.
ಬಿಸಿಲಿಗೆ ಮೈಯೊಡ್ಡಿದ್ದ ಹುಲಿರಾಯ: ಚಾಮರಾಜನಗರ ತಾಲೂಕಿನ ಕೆ.ಗುಡಿ ಸಫಾರಿಯಲ್ಲಿ ಪ್ರವಾಸಿಗರಿಗೆ ಇಂದು ಸೂಪರ್ ಮಂಡೇ ಆಗಿದ್ದು, ಹುಲಿ ಭರ್ಜರಿ ದರ್ಶನ ಕೊಟ್ಟಿದೆ. ಚುಮು-ಚುಮು ಚಳಿ ನಡುವೆ ಬಿಸಿಲಿಗೆ ಮೈಯೊಡ್ಡಿದ ಹುಲಿಯನ್ನು ಕಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ.
ಇದನ್ನೂ ಓದಿ: ರೈಲ್ವೆ ಬ್ಯಾರಿಕೇಡ್ ಕಂಬಿಗಳ ನಡುವೆ ಸಿಲುಕಿ ಒದ್ದಾಡಿದ ಕಾಡಾನೆ; ಜೆಸಿಬಿ ಸಹಾಯದಿಂದ ರಕ್ಷಣೆ- ವಿಡಿಯೋ