ಉಡುಪಿ ಜಿಲ್ಲಾ ಉಸ್ತುವಾರಿ, ರಾಜ್ಯ ಮೀನುಗಾರಿಕಾ, ಯುವಜನ, ಕ್ರೀಡಾ ಸಚಿವ ಜೊತೆಗೆ ದೇಶದ ಶ್ರೀಮಂತ ರಾಜಕಾರಣಿಗಳ ಪೈಕಿ ಹತ್ತನೇ ಸ್ಥಾನದಲ್ಲಿರುವ ಪ್ರಮೋದ್ ಮಧ್ವರಾಜ್ ತಮ್ಮ ರಾಜಕೀಯ ಜೀವನದ ಮೊದಲ ಪ್ರಯತ್ನದಲ್ಲೇ ಸೋಲು ಅನುಭವಿಸಿದ್ದರು. 2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದ ಪ್ರಮೋದ್, ಬಿಜೆಪಿಯ ರಘುಪತಿ ಭಟ್ ವಿರುದ್ದ ಸೋಲು ಅನುಭವಿಸಿದ್ದರು. 2013ರ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿದ ಪ್ರಮೋದ್, ಬಿಜೆಪಿಯ ಸುಧಾಕರ್ ಶೆಟ್ಟಿಯವರನ್ನು ಭಾರೀ ಅಂತರದಿಂದ ಸೋಲಿಸಿ, ಮೊದಲ ಬಾರಿಗೆ ಅಸೆಂಬ್ಲಿಗೆ ಆಯ್ಕೆಯಾಗಿದ್ದರು.
ಮೊದಲ ಬಾರಿಗೆ ಕರ್ನಾಟಕ ಅಸೆಂಬ್ಲಿಗೆ ಆಯ್ಕೆಯಾದರೂ, ಸಿದ್ದರಾಮಯ್ಯನವರ ಸರಕಾರದಲ್ಲಿ ಸಚಿವ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದ ಪ್ರಮೋದ್ ಮಧ್ವರಾಜ್ ಅವರ ಈ ಪ್ರಯತ್ನದ ಹಿಂದೆ, ಏನೇನೋ ಸುದ್ದಿಗಳು ಹರಿದಾಡುತ್ತಿದ್ದವು. ರಾಜ್ಯ ಚುನಾವಣಾ ಈ ವರ್ಷದಲ್ಲಿ ಉಡುಪಿಯ ಐಬಿಯಲ್ಲಿ (IB) ಪ್ರಮೋದ್ ಮಧ್ವರಾಜ್ ಜೊತೆ 'ಒನ್ ಇಂಡಿಯಾ' ನಡೆಸಿದ ಸಂದರ್ಶನದ ಆಯ್ದಭಾಗ ಇಂತಿದೆ. ಸಂದರ್ಶನದಲ್ಲಿ ಬಿಜೆಪಿ ಸೇರುವ ಬಗ್ಗೆ, ಜೊತೆಗೆ ಇತರ ವಿಚಾರಗಳ ಬಗ್ಗೆ ಪ್ರಮೋದ್ ಕಡ್ಡಿತುಂಡಾದ ಹಾಗೆ ಉತ್ತರಿಸಿದ್ದಾರೆ.